ಡಾಯಿಲ್, ಸರ್ ಆರ್ಥನ್ ಕಾನನ್
1859-1930. ಆಧುನಿಕ ಪತ್ತೇದಾರಿ ಕಾದಂಬರಿ ಕಥೆಯ ನಿರ್ಮಾಪಕನೆಂದೂ ವಿಶೇಷವಾಗಿ ಷರ್‍ಲಾಕ್ ಹೋಮ್ಸ್ ಎಂಬ ಹೆಸರಿನ ಖಾಸಗಿ ಪತ್ತೇದಾರಿ ಪಾತ್ರದ ಸೃಷ್ಟಿಕರ್ತನೆಂದೂ ಕೀರ್ತಿ ಪಡೆದ ಇಂಗ್ಲಿಷ್ ಕಾದಂಬರಿಕಾರ ಹಾಗೂ ಇತಿಹಾಸಕಾರ. ಹುಟ್ಟಿದ್ದು ಎಡಿನ್‍ಬರೋದಲ್ಲಿ. ಸ್ಟೋನಿರ್ಹಸ್ಟ್ ಮತ್ತು ಜರ್ಮನಿಗಳಲ್ಲಿ ಮೊದಲ ಶಿಕ್ಷಣ ಪಡೆದು 1876-80ರ ವರೆಗೆ ಎಡಿನ್‍ಬರೋ ವಿಶ್ವವಿದ್ಯಾನಿಲಯದಲ್ಲಿ ವೈದ್ಯಶಾಸ್ತ್ರವನ್ನು ಅಭ್ಯಾಸ ಮಾಡಿ, ಅನಂತರ ಸುಮಾರು ಎಂಟು ವರ್ಷಕಾಲ ಸೌತ್‍ಸೀ ಎಂಬಲ್ಲಿ ವೈದ್ಯವೃತ್ತಿಯಲ್ಲಿದ್ದು ಅಲ್ಲಿಂದಾಚೆಗೆ ತನ್ನ ಕಾಲವನ್ನೆಲ್ಲ ಸಾಹಿತ್ಯಕ್ಕೇ ಮೀಸಲಿಟ್ಟ. ಇವನ ಪತ್ತೇದಾರಿ ಕಥೆಗಳ ನಾಯಕ ಷರ್‍ಲಾಕ್ ಹೋಮ್ಸ್ ಓದುಗರ ಮನಸ್ಸನ್ನು ಬಹುಬೇಗ ಸೂರೆಗೊಂಡ. ಎಡಿನ್‍ಬರೋದಲ್ಲಿ ಡಾಯಿಲ್‍ನ ಪ್ರಾಧ್ಯಾಪಕನಾಗಿದ್ದ ಡಾಕ್ಟರ್ ಜೋಸೆಫ್‍ಬೆಲ್‍ನ ವ್ಯಕ್ತಿತ್ವದಿಂದ ಈ ಪಾತ್ರದ ಮಾದರಿ ದೊರೆಯಿತೆಂದು ಪ್ರತೀತಿ. ಈತನ ಕಥೆಗಳನ್ನು ಓದಿದ ಬಹುಮಂದಿ ಷರ್‍ಲಾಕ್ ಹೋಮ್ಸ್ ನಿಜಜೀವನದಲ್ಲಿದ್ದ ಒಬ್ಬ ವ್ಯಕ್ತಿಯೆಂದೇ ಭಾವಿಸಿದ್ದರು. ಅನೇಕರು ಷರ್‍ಲಾಕ್ ಹೋಮ್ಸ್‍ನ 221-ಟಿ, ಬೇಕರ್ ಸ್ಟ್ರೀಟ್, ಲಂಡನ್ ಎಂಬ ಸಲಹಾ ಕೊಠಡಿಯ ವಿಳಾಸಕ್ಕೆ (ಅದು ಕಾಲ್ಪನಿಕವೆಂದು ತಿಳಿಯದೆ) ಕಾಗದಗಳನ್ನು ಸಹ ಬರೆಯುತ್ತಿದ್ದರಂತೆ. ಹೋಮ್ಸ್‍ನ ವ್ಯಕ್ತಿತ್ವ ವಿಲಕ್ಷಣ ಗುಣಗಳಿಂದ ಕೂಡಿದುದು. ಅದು ಓದುಗರ ಕಣ್ಣ ಮುಂದೆ ಬಂದು ನಿಲ್ಲುವಂತೆ ಸ್ಪಷ್ಟವಾಗಿ ಡಾಯಿಲ್ ಚಿತ್ರಿಸಿದ್ದಾನೆ. ಆತ ಮೇಲ್ನೋಟಕ್ಕೆ ಉದಾಸೀನ ಸ್ವಭಾವದವನಂತೆ ಕಂಡರೂ ಆ ನಿರ್ಲಕ್ಷ್ಯದ ಮರೆಯಲ್ಲಿ ಅಸಾಧಾರಣ ಚೈತನ್ಯ ಅಡಗಿತ್ತು. ಎಂಥ ನಿಗೂಢ ರಹಸ್ಯವನ್ನೂ ಭೇದಿಸುವ ಚಿಕಿತ್ಸಕ ಬುದ್ಧಿ, ವಿಶ್ಲೇಷಣ ಮನೋಧರ್ಮ ಆತನದು. ವೈದ್ಯನ ನಿಲುವಂಗಿಯನ್ನು ಧರಿಸಿ, ಕೈಯಲ್ಲಿ ಚುಚ್ಚುಸೂಜಿಯನ್ನು ಹಿಡಿದು, ಬಾಯಲ್ಲಿ ಚುಟ್ಟ ಕಚ್ಚಿಕೊಂಡಿರುವ ಹೊಳಪು ಕಣ್ಣಿನ ಷರ್‍ಲಾಕ್ ಹೋಮ್ಸ್ ವ್ಯಕ್ತಿಚಿತ್ರ ಪ್ರತಿ ಕತೆಯಲ್ಲೂ ಸ್ಪಷ್ಟವಾಗಿ ಮೂಡಿಬಂದಿದೆ. ಉಳಿದವರು ಅಮುಖ್ಯವೆಂದು ಕಡೆಗಾಣಿಸುತ್ತಿದ್ದಂಥ ಸುಳಿವುಗಳ ಜಾಡನ್ನೇ ಹಿಡಿದು ಎಂಥ ನಿಗೂಢ ಅಪರಾಧವನ್ನೂ ತನಿಖೆ ಮಾಡುತ್ತಿದ್ದ ಆತನ ಸೂಕ್ಷ್ಮಬುದ್ಧಿ ಎಲ್ಲರನ್ನೂ ಚಕಿತಗೊಳಿಸುತ್ತಿತ್ತು. ಆತನ ತನಿಖಾ ಕ್ರಮ ಅಪರಾಧ ತನಿಖಾ ವಿಧಾನಗಳಿಗೆ ಒಂದು ಹೊಸ ರೂಪವನ್ನೇ ಕೊಟ್ಟಿದೆ. ಆತನ ಆಪ್ತ ಸಹಾಯಕ ಎನಿಸಿದ ಡಾ. ವಾಟ್‍ಸನ್ ಎಲ್ಲ ರೀತಿಗಳಲ್ಲಿಯೂ ಹೋಮ್ಸ್‍ನ ಸ್ವಭಾವಕ್ಕೆ ವಿರುದ್ಧವಾದವ. ಅವನೇ ಕಥಾನಿರೂಪಕ. ಸ್ವಭಾವದ ವೈದೃಶ್ಯದಿಂದಾಗಿ ಇವರಿಬ್ಬರ ಸಂಭಾಷಣೆಗಳು ಅತ್ಯಂತ ಸ್ವಾರಸ್ಯಕರವಾಗಿವೆ. 

	ಈ ಪತ್ತೇದಾರನ ಬಗ್ಗೆ ಡಾಯಿಲ್ ಬರೆದ ಕಥೆಗಳು ಒಟ್ಟು 60. ಅವುಗಳಲ್ಲಿ ನಾಲ್ಕು ಕಾದಂಬರಿಗಳು. 1882ರಲ್ಲಿ ಪ್ರಕಟವಾದ ಎ ಸ್ಟಡಿ ಇನ್ ಸ್ಕಾರ್‍ಲೆಟ್ ಎಂಬುದು ಮೊದಲನೆಯದು. ಅನಂತರ ಬರೆದದ್ದು ದಿ ಸೈನ್ ಆಫ್ ಫೋರ್ (1890). ಇವು ಮೊದಲು ಹೆಚ್ಚು ಗಮನ ಸೆಳೆಯಲಿಲ್ಲ. ಆದರೆ ಸ್ಟ್ರ್ಯಾಂಡ್ ಪತ್ರಿಕೆಯಲ್ಲಿ ಪ್ರಕಟವಾದ ಧಾರಾವಾಹಿ ಕಥೆಗಳಿಂದ ಷರ್‍ಲಾಕ್ ಹೋಮ್ಸ್‍ನ ಹಾಗೂ ಆ ಪಾತ್ರ ಸೃಷ್ಟಿಮಾಡಿದ ಲೇಖಕನ ಹೆಸರುಗಳು ಮನೆಮಾತಾದವು. ದಿ ಅಡ್‍ವೆಂಚರ್ಸ್ ಆಫ್ ಷರ್‍ಲಾಕ್ ಹೋಮ್ಸ್ (1892) ಮತ್ತು ದಿ ಮೆಮ್ವಾಯಿರ್ಸ್ ಆಫ್ ಷರ್‍ಲಾಕ್ ಹೋಮ್ಸ್ (1894) ಎಂಬ ಎರಡು ಗ್ರಂಥಗಳಲ್ಲಿ ಈ ಕಥೆಗಳು ಸಂಗ್ರಹಗೊಂಡವು.

	ಈ ಹೊತ್ತಿಗೆ ಪತ್ತೇದಾರಿ ಬರೆದು ಬರೆದು ಡಾಯಿಲ್‍ಗೆ ಸಾಕಾಗಿತ್ತು. ಆದ್ದರಿಂದ ತನ್ನ ಕಥಾನಾಯಕ ಷರ್‍ಲಾಕ್ ಹೋಮ್ಸ್ ಸತ್ತನೆಂದು ಚಿತ್ರಿಸಿ, ಆ ಕಥಾಸರಣಿಗೆ ಹಠಾತ್ತನೆ ಸಮಾಪ್ತಿ ಹೇಳಿದ. ಓದುಗರಿಗಾದರೋ ಷರ್‍ಲಾಕ್ ಹೋಮ್ಸ್‍ನ ಸಾಹಸಗಳ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕೆಂಬ ಆಸೆ. ಜೊತೆಗೆ ಸ್ಟ್ರ್ಯಾಂಡ್ ಪತ್ರಿಕೆ ಸಂಪಾದಕನ ಒತ್ತಾಯವೂ ಸೇರಿತು. ಈ ಒತ್ತಾಯಕ್ಕೆ ಕಟ್ಟುಬಿದ್ದ ಡಾಯಿಲ್ ಸಾವನ್ನಪ್ಪಿದ್ದ ಷರ್‍ಲಾಕ್ ಹೋಮ್ಸ್‍ಗೆ ಮತ್ತೆ ಜೀವ ಕೊಟ್ಟ. ಡಾಯಿಲ್ ಬದುಕಿದಷ್ಟು ದಿವಸವೂ ಆ ಕಥೆಗಳನ್ನು ಮುಂದುವರಿಸಿದ. ದಿ ಹೌಂಡ್ ಆಫ್ ದಿ ಬ್ಯಾಸ್ಕರ್‍ವಿಲ್ಸ್ (1902), ದಿ ರಿಟರ್ನ್ ಆಫ್ ಷರ್‍ಲಾಕ್ ಹೋಮ್ಸ್ (1905) ದಿ ವ್ಯಾಲಿ ಆಫ್ ಫಿಯರ್ (1915), ಹಿಸ್ ಲಾಸ್ಟ್ ಬೊ (1915), ದಿ ಕೇಸ್ ಬುಕ್ ಆಫ್ ಷರ್‍ಲಾಕ್ ಹೋಮ್ಸ್ (1927)- ಇವೇ ಆ ಕತೆಗಳು.

	ಷರ್‍ಲಾಕ್ ಹೋಮ್ಸ್‍ಗೆ ಸಂಬಂಧಪಟ್ಟ ಎಲ್ಲ ವಸ್ತುಗಳನ್ನೂ ಸಂಗ್ರಹಿಸಿದ ಒಂದು ಅಪೂರ್ವ ಪ್ರದರ್ಶನ ಲಂಡನ್ನಿನಲ್ಲಿ ಏರ್ಪಟ್ಟಿತು (1951). ಕಥೆಗಳಲ್ಲಿ ಚಿತ್ರಿಸಿದಂತೆಯೇ ಅವನ ಸಲಹಾಕೊಠಡಿಯನ್ನೂ ರಚಿಸಲಾಗಿತ್ತು. ಈ ಪ್ರದರ್ಶನ ಷರ್‍ಲಾಕ್ ಹೋಮ್ಸ್‍ನ ಮೆಚ್ಚುಗರನ್ನು ಪ್ರಪಂಚದ ನಾನಾಭಾಗಗಳಿಂದ ಆಕರ್ಷಿಸಿತು.

	ಡಾಯಲ್‍ನ ಇತರ ಕೃತಿಗಳು ಐತಿಹಾಸಿಕ ವಸ್ತುವನ್ನುಳ್ಳವು. ಅವುಗಳಲ್ಲಿ ಮುಖ್ಯವಾದವು- ದಿ ವೈಟ್ ಕಂಪನಿ (1890), ಹಳೆಯ ಮಾದರಿಯ ಹೋರಾಟವನ್ನು ಬಣ್ಣಿಸುವ ರಾಡ್ನಿ ಸ್ಟೋನ್ (1896), ಸರ್ ನಿಗೆಲ್ (1906), ದಿ ಎಕ್ಸ್ ಪ್ಲಾಯಿಟ್ಸ್ ಆಫ್ ಬ್ರಿಗೇಡಿಯರ್ ಜಿರಾಲ್ಡ್‍ನಲ್ಲಿ ನೆಪೋಲಿಯನ್ನನ ಸೇವೆಯಲ್ಲಿದ್ದ ಸಾಹಸಿಯಾದ ಬ್ರಿಗೇಡಿಯರ್ ಜನರಲ್ ಜಿರಾಲ್ಡ್‍ನನ್ನು ಕುರಿತು ಬರೆದ ಕಥೆಗಳಿವೆ. ದಿ ಟ್ರಾಜಿಡಿ ಆಫ್ ಕೊಬಾಸ್ಕೊ (1898), ದಿ ಲಾಸ್ಟ್ ವಲ್ರ್ಡ್ (1912) ಮತ್ತು ದಿ ಪಾಯಿಸನ್ ಬೆಲ್ಟ್ (1913) ಎಂಬ ಸಾಹಸದ ಕಥೆಗಳು ಈತನ ಕಲ್ಪನಾ ಸೃಷ್ಟಿಗೆ ಸಾಕ್ಷಿಯಾಗಿವೆ. ಇದಲ್ಲದೆ ದಿ ಗ್ರೇಟ್ ಬೋಯರ್ ವಾರ್ (1900) ಎಂಬ ಕೃತಿ ಯುದ್ಧಭೂಮಿಯಲ್ಲಿ ವೈದ್ಯನಾಗಿ ಈತ ಪಡೆದ ಅನುಭವಗಳನ್ನು ವಿವರಿಸುತ್ತದೆ. ಈ ಗ್ರಂಥ ಇತಿಹಾಸದಲ್ಲಿದ್ದ ಇವನ ಗಂಭೀರ ಆಸಕ್ತಿಗೂ ರಾಷ್ಟ್ರ ಪ್ರೇಮಕ್ಕೂ ಆಳವಾದ ವಿದ್ವತ್ತಿಗೂ ಸಾಕ್ಷಿಯಾಗಿದೆ. ಒಂದನೆಯ ಮಹಾಯುದ್ಧದಲ್ಲಿ ಪಶ್ಚಿಮ ರಂಗದಲ್ಲಿ ಇಂಗ್ಲೆಂಡ್ ನಡೆಸಿದ ಕದನಗಳ ಇತಿಹಾಸವನ್ನೂ ಈತ ಬರೆದಿದ್ದಾನೆ.

	ಇಳಿವಯಸ್ಸಿನಲ್ಲಿ ಈತನ ಆಸಕ್ತಿ ಆಧ್ಯಾತ್ಮದ ಕಡೆ ತಿರುಗಿದುದರಿಂದ ಎ ಹಿಸ್ಟರಿ ಆಫ್ ಸ್ಪಿರಿಚ್ಯಯಾಲಿಸಮ್ (1926) ಕೃತಿ ಹೊರಬಂತು. ಅಲ್ಲದೆ ಎರಡು ನಾಟಕಗಳನ್ನೂ ಪ್ರಚಲಿತ ವಿಷಯಗಳ ಬಗ್ಗೆ ಕಿರುಹೊತ್ತಿಗೆಗಳನ್ನು ಈತ ಬರೆದಿದ್ದಾನೆ. ಒಟ್ಟಿನಲ್ಲಿ ಐರೋಪ್ಯ ಪತ್ತೇದಾರಿ ಕಥೆಗಳನ್ನು ಹೊಸ ಮಾದರಿಯನ್ನೇ ಹಾಕಿಕೊಟ್ಟ ಕೀರ್ತಿ ಡಾಯಿಲ್‍ಗೆ ಸಲ್ಲಬೇಕು. ಕಲ್ಪನಾಸೃಷ್ಟಿಯ ಜೊತೆಗೆ ಈತನಿಗಿದ್ದ ಇತಿಹಾಸದಲ್ಲಿನ ಆಸಕ್ತಿ, ದೇಶಪ್ರೇಮ, ಸೃಜನಶೀಲ ಶಕ್ತಿ ಸಾಮಾನ್ಯ ಜನರ ಹೃದಯದಲ್ಲಿ ಈತನಿಗೆ ಶಾಶ್ವತ ಸ್ಥಾನವನ್ನು ನಿರ್ಮಿಸಿದವು. (ಎಚ್.ಜಿ.ಎಸ್.ಆರ್.; ಎಚ್.ವಿ.ಎಸ್.) ಪರಿಷ್ಕರಣೆ:ಎಲ್. ಎಸ್. ಶೇಷಗಿರಿರಾವ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ